ಟರ್ಬೆಲೇರಿಯ -
	ಪ್ಲ್ಯಾಟಿಹೆಲ್ಮಿಂತೀಸ್û (ಚಪ್ಪಟೆ ಹುಳುಗಳ) ವಿಭಾಗಕ್ಕೆ ಸೇರಿದ ಒಂದು ವರ್ಗ. ಇದಕ್ಕೆ ಸೇರಿದ ಪ್ರಾಣಿಗಳಲ್ಲಿ ಹೆಚ್ಚಿನವು ಸ್ವಾವಲಂಬಿಗಳು. ಕೆಲವು ಮಾತ್ರ ಪರಾವಲಂಬಿಗಳು ಇಲ್ಲವೆ ಸಹಭೋಜಿಗಳು. ಇವುಗಳ ದೇಹದಲ್ಲಿ ಖಂಡವಿಂಗಡಣೆಯಿಲ್ಲ. ದೇಹ ಗುಂಡಗಿರಬಹುದು, ಎಲೆಯಂತಿರಬಹುದು ಇಲ್ಲವೆ ಪಟ್ಟೆಯಂತಿರಬಹುದು. ಅಲ್ಲದೆ ಇದು ಮೃದುವಾಗಿಯೂ ಚಪ್ಪಟೆಯಾಗಿಯೂ ಇದೆ. ದೇಹದ ಉದ್ದ ಸು. 5ಮಿ.ಮೀ ಕೆಲವು ಬಗೆಯ ಹುಳುಗಳು ಮಾತ್ರ 50 ಮಿ.ಮೀ. ಅಥವಾ ಹೆಚ್ಚು ಉದ್ದವಿರುವುದುಂಟು. ಇಂಥ ಉದ್ದನೆಯ ದೇಹದ ಹುಳುಗಳಲ್ಲಿ ತೆವಳುಪಾದ (ಕ್ರೀಪಿಂಗ್ ಸೋಲ್) ಇದೆ. ದೇಹದ ಬಣ್ಣ ಬಿಳಿ, ಕಂದು, ಕಪ್ಪು ಅಥವಾ ತಿಳಿಬೂದಿ. ಕೆಲವು ಸಲ ಇವು ವಾಸಿಸುವ ಸ್ಥಳಗಳ ಹಿನ್ನೆಲೆಗೆ ತಕ್ಕಂತೆ ಪಟ್ಟೆಗಳಿರುವುದೂ ಉಂಟು. ದೇಹದ ಮೇಲೆ ಶಿಲಕೆಗಳೆಂಬ ಸೂಕ್ಷ್ಮವಾದ ಬಿರುಗೂದಲುಗಳಿವೆ.

	ಸಿಹಿನೀರಿನ ಪ್ಲನೇರಿಯ, ಡುಗೇಸಿಯ ಟೈಗ್ರೀನ ಈ ವರ್ಗದ ಉತ್ತಮ ಪ್ರತಿನಿಧಿ. ಇದರ ಲಕ್ಷಣಗಳು ಪ್ರರೂಪಿ ಲಕ್ಷಣಗಳಾಗಿದ್ದು ಇತರ ಬಗೆಯ ಚಪ್ಪಟೆ ಹುಳುಗಳಿಗೂ ಅನ್ವಯವಾಗುತ್ತವೆ. ಸಾಮಾನ್ಯವಾಗಿ ಇದು ನೀರಿನಲ್ಲಿರುವ ಕಲ್ಲು, ಎಲೆ ಮುಂತಾದವುಗಳ ತಳಭಾಗದಲ್ಲಿ ವಾಸಿಸುತ್ತದೆ. ದೇಹದ ಉದ್ದ 2ಸೆಂ.ಮೀ. ತಲೆ ತ್ರಿಕೋನಾಕಾರದ್ದು. ತಲೆಯ ಆಚೀಚೆ 2 ಕಣ್ಣುಗಳಿವೆ. ಕಣ್ಣುಗಳು ಕೇವಲ ಬೆಳಕಿನ ಸೂಕ್ಷ್ಮತೆಯನ್ನು ಹೊರತು ಸ್ಪಷ್ಟ ಪ್ರತಿಬಿಂಬಗಳನ್ನು ಗುರುತಿಸಲಾರವು. ದೇಹದಲ್ಲಿ ಸಣ್ಣ ಶಿಲಕೆಗಳು (ಸಿಲಿಯ) ಇವೆ. ಸ್ನಾಯುಗಳ ಸಂಕುಚನ ವಿಕಸನಗಳ ಸಹಾಯದಿಂದ ಶಿಲಕೆಗಳನ್ನು ಬಡಿದು ಇದು ಈಜುತ್ತದೆ. ದೇಹದಿಂದ ಒಂದು ರೀತಿಯ ಅಂಟು (ಮ್ಯೂಕಸ್) ಉತ್ಪತ್ತಿಯಾಗಿ ದೇಹವನ್ನೆಲ್ಲ ಒಂದು ಪದರದಂತೆ ಸುತ್ತುವರಿದಿರುತ್ತದೆ. ದೇಹದ ಮುಂತುದಿಯೆಡೆಗೆ ತಳಭಾಗದಲ್ಲಿ ಬಾಯಿ ಉಂಟು. ಇದೇ ಆಸನದ್ವಾರವೂ ಕೂಡ. ಸಣ್ಣ ಸೊಂಡಿಲಿನಂತಿರುವ ಗಂಟಲ ಕುಹರದ (ಫ್ಯಾರಿಂಕ್ಸ್) ಮೂಲಕ ಜೀರ್ಣರಸಗಳು ಹರಿದು ಆಹಾರವನ್ನು ದೇಹದ ಹೊರಗಡೆಯೇ ಸ್ವಲ್ಪ ಜೀರ್ಣವಾಗುವ ಹಾಗೆ ಮಾಡಿ ಆಹಾರದ ತುಣುಕುಗಳನ್ನು ಬಾಯಿಯ ಮೂಲಕ ಒಳಕ್ಕೆಳೆದುಕೊಳ್ಳುತ್ತದೆ. ಗಂಟಲ ಕುಹರ ದಾಟಿದ ಆಹಾರದ ತುಣುಕುಗಳು ಮೂರು ಕವಲುಗಳುಳ್ಳ ಕರುಳನ್ನು ಸೇರುತ್ತವೆ. ಇವುಗಳಲ್ಲಿ ಎರಡು ಕವಲುಗಳು ದೇಹದ ಎಲ್ಲ ಭಾಗಗಳಿಗೂ ಆಹಾರವನ್ನು ಪೂರೈಸುತ್ತವೆ. ಕೆಲವು ಸಲ ಸಣ್ಣ ಪ್ರಾಣಿಗಳನ್ನು ಹಾಗೂ ಸಣ್ಣ ಆಹಾರದ ತುಣುಕುಗಳನ್ನು ದೇಹದ ಹೊರಗೆ ಜೀರ್ಣಿಸಿಕೊಳ್ಳುವುದೂ ಉಂಟು.

	ಟರ್ಬೆಲೇರಿಯದ ಹುಳುಗಳಲ್ಲಿ ಪ್ರತ್ಯೇಕ ಶ್ವಾಸಾಂಗಗಳಿಲ್ಲ. ದೇಹದ ಜೀವಕೋಶಗಳು ನೇರವಾಗಿ ಆಮ್ಲಜನಕವನ್ನು ಬಳಸಿಕೊಳ್ಳುತ್ತವೆ. ದೇಹದ ಎಲ್ಲ ಭಾಗಳಲ್ಲಿಯೂ ಹರಡಿರುವ ಆಲಿಕೆಗಳಂತಿರುವ ಜ್ವಾಲಾಕೋಶಗಳು (ಫ್ಲೇಮ್ ಸೆಲ್ಸ್)-ಚಯಾಪಚಯ ಕ್ರಿಯೆಯ ಫಲವಾಗಿ ಉತ್ಪತ್ತಿಯಾಗುವ ವಿಸರ್ಜನೆಗಳನ್ನು ತಮ್ಮಲ್ಲಿರುವ ಕಶಗಳ ಸಹಾಯದಿಂದ ಒಳಕ್ಕೆಳೆದುಕೊಂಡು ದೇಹದ ಎರಡು ಪಾಶ್ರ್ವಗಳಲ್ಲಿರುವ ಯಾವುದಾದರೂ ಶುದ್ಧೀಕರಣಾಂಗದ ನಾಳದಲ್ಲಿ ಬಿಡುತ್ತವೆ. ಈ ವಿಸರ್ಜನಾ ವಸ್ತುಗಳು ದೇಹದ ಬೆನ್ನಿನ ಭಾಗದಲ್ಲಿರುವ ಶುದ್ಧೀಕರಣ ರಂಧ್ರಗಳ ಮೂಲಕ ಹೊರಬೀಳುತ್ತದೆ.

	ತಲೆಯ ಬಳಿಯಿರುವ ನರಮುಡಿಯಿಂದ (ಗ್ಯಾಂಗ್ಲಿಯ) ಎರಡು ನರಗಳು ಹೊರಟು ದೇಹದ ಎರಡೂ ಪಕ್ಕಗಳಲ್ಲಿ ಸಾಗುತ್ತವೆ. ಇವುಗಳ ಮಧ್ಯೆ ಅಡ್ಡಡ್ಡಲಾಗಿ ಇತರ ನರಬಳ್ಳಿಗಳು ಇರುವುದರಿಂದ ಇಡೀ ನರಮಂಡಲ ಒಂದು ಏಣಿಯ ರೀತಿ ಕಾಣುತ್ತದೆ. ಅಲ್ಲದೆ ಇನ್ನೂ ಸಣ್ಣ ಗಾತ್ರದ ನರಗಳು ದೇಹದ ಎಲ್ಲ ಭಾಗಗಳಿಗೆ ಸಾಗುತ್ತವೆ.

	ಈ ಗುಂಪಿನ ಹುಳುಗಳು ಉಭಯಲಿಂಗಿಗಳು. ಕೂಡುವಿಕೆಯ ಕಾಲದಲ್ಲಿ ಎರಡು ಪ್ರಾಣಿಗಳು ಏಕಕಾಲದಲ್ಲಿ ಗಂಡು ಹಾಗೂ ಹೆಣ್ಣುಗಳ ಹಾಗೆ ವರ್ತಿಸಿ ವೀರ್ಯವನ್ನು ಅದಲುಬದಲು ಮಾಡಿಕೊಳ್ಳುತ್ತವೆ. ಇವುಗಳ ಜನನಾಂಗಗಳು ಸಂಕೀರ್ಣವಾದವು. ದೇಹದ ಎರಡೂ ಕಡೆಯಲ್ಲಿ ವೃಷಣ ಹಾಗೂ ಅಂಡಾಶಯಗಳಿವೆ. ವೃಷಣಗಳಿಂದ ಉತ್ಪತ್ತಿಯಾದ ವೀರ್ಯ ಸಣ್ಣಸಣ್ಣ ವಿಸರ್ಜಕ ನಾಳಗಳಿಂದ ದೊಡ್ಡ ವಿಸರ್ಜಕ ನಾಳಗಳ ಮೂಲಕ ಹಾದು ರೇತಸ್ಸಿನ ಚೀಲದಲ್ಲಿ ಸಂಗ್ರಹಗೊಳ್ಳುವುದು. ಅಂಡಾಶಯಗಳಲ್ಲಿ ಉತ್ಪತ್ತಿಯಾದ ಅಂಡಗಳು ಅಂಡನಾಳದ ಮೂಲಕ ಹಾದು ಬರುವಾಗ ಬಂಡಾರ ಗ್ರಂಥಿಗಳಿಂದ ಉತ್ಪತ್ತಿಯಾದ ಬಂಡಾರ ಕೋಶಗಳೊಡನೆ ಸೇರುತ್ತದೆ. ಸಂಭೋಗ ಸಮಯದಲ್ಲಿ ಶಿಶ್ನದ ಮೂಲಕ ರೇತಸ್ಸಿನ ಕೋಶವನ್ನು ಸೇರುವ ವೀರ್ಯ ಅಂಡನಾಳದ ಬಳಿ ಅಂಡಗಳೊಡನೆ ಸೇರಿಕೊಂಡು ಭ್ರೂಣಗಳನ್ನು ಉಂಟುಮಾಡುತ್ತವೆ. 4ರಿಂದ 20 ಭ್ರೂಣಗಳು ಬಂಡಾರ ಕೋಶಗಳೊಡಗೂಡಿ ಒಂದು ಕೋಶದ ರೂಪ ತಾಳಿ ಜನನ ರಂಧ್ರದ ಮೂಲಕ ಹೊರಬರುತ್ತವೆ. ಈ ಕೋಶಗಳು ನೀರಿನಲ್ಲಿರುವ ಕಲ್ಲು, ಎಲೆ ಮುಂತಾದವುಗಳ ಕೆಳಭಾಗಕ್ಕೆ ಅಂಟಿಕೊಳ್ಳುತ್ತವೆ. ಕೊಂಚ ಕಾಲಾನಂತರ ಚಿಕ್ಕಚಿಕ್ಕ ಪ್ಲನೇರಿಯಗಳು ಕೋಶದ ಹೊರಕವಚವನ್ನು ಒಡೆದುಕೊಂಡು ಹೊರಬರುವುವು.

	ಟರ್ಬೆಲೇರಿಯದ ಹುಳುಗಳಲ್ಲಿ ಅಲೈಂಗಿಕ ಸಂತಾನೋತ್ಪತ್ತಿಯನ್ನೂ ಕಾಣಬಹುದು. ಆಕಸ್ಮಿಕವಾಗಿ ಬೇರ್ಪಟ್ಟ ಪ್ರಾಣಿಯ ಭಾಗಗಳು ತಮ್ಮಲ್ಲಿಲ್ಲದ ಭಾಗಗಳನ್ನು ಶೀಘ್ರದಲ್ಲಿ ವೃದ್ಧಿಸಿಕೊಂಡು ಅನೇಕ ಸ್ವತಂತ್ರ ಜೀವಿಗಳಾಗಿ ಮಾರ್ಪಡುತ್ತವೆ.
(ಕೆ.ಎಸ್.ಕೆ.ಪಿ.)
ಪರಿಷ್ಕರಣೆ:
 ಡಾ|| ಎನ್. ಎಸ್. ಲೀಲಾ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ